ಘಿಯಾಸ್ - ಉದ್ - ದೀನ್ ಮಹಮ್ಮದ್ (ಘೋರಿ)

1157-1202. ಆಫ್ಘಾನಿಸ್ತಾನದ ಘೋರಿ ಮನೆತನದ ಒಬ್ಬ ಪ್ರಸಿದ್ಧ ಸುಲ್ತಾನ. 12ನೆಯ ಶತಮಾನದಲ್ಲಿ ಭಾರತದ ಮೇಲೆ ದಂಡಯಾತ್ರೆಗಳನ್ನು ನಡೆಸಿ ದೆಹಲಿಯ ಸುಲ್ತಾನರ ಆಳ್ವಿಕೆಗೆ ಅಸ್ತಿಭಾರ ಹಾಕಿದ ಮಹಮ್ಮದ್ ಘೋರಿಯ ಅಣ್ಣ ಸೈಫ್-ಉದ್-ದೀನನ ಮರಣಾನಂತರ (1157) ಪಟ್ಟಕ್ಕೆ ಬಂದ. ಹಿಂದಿನಿಂದಲೂ ನಡೆಯುತ್ತಿದ್ದ ಘೋರಿ ಮತ್ತು ಘಜಿû್ನ ಮನೆತನಗಳ ನಡುವಣ ಹೋರಾಟ ಇವನ ಕಾಲದಲ್ಲಿ ಅಂತ್ಯವಾಯಿತು. ಕೈಬಿಟ್ಟು ಹೋಗಿದ್ದ ಘಜಿû್ನ ಪ್ರಾಂತ್ಯವನ್ನು ಘಿಯಾಸ್-ಉದ್-ದೀನ್ ಮತ್ತೆ ಹೋರಾಡಿ ಆಕ್ರಮಿಸಿಕೊಂಡು, ತಮ್ಮನಾದ ಮಹಮದ್ ಘೋರಿಯನ್ನು ಆ ಪ್ರಾಂತ್ಯದ ಅಧಿಕಾರಿಯಗಿ ನೇಮಿಸಿದ. ಘಜಿû್ನಯಲ್ಲಿ ಘೋರಿ ಮಹಮ್ಮದ್ ಹೆಚ್ಚು ಕಡಿಮೆ ಸ್ವತಂತ್ರ ಸುಲ್ತಾನನಂತೆ ಅಧಿಕಾರ ನಡೆಸುತ್ತಿದ್ದರೂ ತನ್ನ ನಾಣ್ಯಗಳ ಮೇಲೆ ತನ್ನ ಅಣ್ಣ ಘಿಯಾಸ್-ಉದ್-ದೀನನ ಹೆಸರನ್ನು ಕೆತ್ತಿಸಿದ. ಘಿಯಾಸ್-ಉದ್-ದೀನನ ಸಾರ್ವಭೌಮಾಧಿಕಾರಕ್ಕೆ ಮನ್ನಣೆ ನೀಡಿದ್ದ. ಅವನು ಭಾರತದ ದಂಡಯಾತ್ರೆ ಕೈಗೊಂಡಾಗಲೂ ಅಣ್ಣನ ಅಧಿಕಾರಿಯಾಗಿಯೇ ಇದ್ದ. ಈ ಸಹೋದರರಲ್ಲಿ ಅಪರೂಪವಾದ ಅನ್ಯೋನ್ಯತೆ ಸಾಮರಸ್ಯಗಳಿದ್ದುವು. ಘಿಯಾಸ್-ಉದ್-ದೀನ್ ಕೊರಾಸಾನ್ ಪ್ರಾಂತ್ಯವನ್ನು ಗೆದ್ದು ತನ್ನ ರಾಜ್ಯಕ್ಕೆ ಸೇರಿಸಿಕೊಂಡ. ಹೀರತ್ ನಗರದಲ್ಲಿ ಒಂದು ಭವ್ಯವಾದ ಮಸೀದಿಯನ್ನು ಕಟ್ಟಿಸಿದ. ಘಿಯಾಸ್-ಉದ್-ದೀನ್ ತೀರಿಕೊಂಡದ್ದು 1202ರಲ್ಲಿ.			(ಬಿ.ಎಸ್.ಎ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ